ನಮ್ಮ ನುಡಿ
ಕನ್ನಡದ ನಾಡು ಚಂದ
ಕನ್ನಡದ ನುಡಿ ಚಂದ
ಕನ್ನಡದ ಜನ ಚಂದ
ನಮ್ಮ ಕನ್ನಡ ಸಂಘ ಚಂದ
ಚಿನ್ನದ ಕೆ ಎಸ್ ಟಿ ಚಂದವೇ ಚಂದ
ನಮ್ಮ ಕನ್ನಡ ಸಂಘ ಸಡಗರ ಸಂಭ್ರಮದಿಂದ ದಾಪುಗಾಲಿಡುತ್ತಾ ತನ್ನ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿದೆ.
ಈ ವರ್ಷದ ಚೊಚ್ಚಲ ಪತ್ರವನ್ನು ಪ್ರಾರಂಭಿಸುವಾಗ, ಮೊಟ್ಟಮೊದಲಿಗೆ, ಕಳೆದ ಐದು ದಶಕಗಳಲ್ಲಿ KSTಯ ಹುಟ್ಟು ಮತ್ತು ಬೆಳವಣಿಗೆಗೆ ಕಾರಣರಾದ ಪ್ರತಿಯೊಬ್ಬರಿಗೂ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ.
KST ಸಂಸ್ಥಾಪಕರು: ಪ್ರಪ್ರಥಮವಾಗಿ, ನಮ್ಮ ಕನ್ನಡ ಸಂಘ ಟೊರೊಂಟೊಗೆ ಭದ್ರ ಬುನಾದಿ ಹಾಕಿದ ನಮ್ಮ ಹಿರಿಯರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಅವರ ಮುಂದಾಲೋಚನೆ, ಭರವಸೆ ಮತ್ತು ಆಕಾಂಕ್ಷೆ, ಕೆನಡಾದ ಕನ್ನಡಿಗರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ನಿರಂತರವಾಗಿ ಪಾಲಿಸಲು ಹಾಗೂ ಅದನ್ನು ನಮ್ಮ ಯುವ ಪೀಳಿಗೆಗೆ ರವಾನಿಸಲು ಸಾಧ್ಯವಾಗಿದೆ.
KST ಸದಸ್ಯರು: KST ಯನ್ನು ಬಲಪಡಿಸಲು ಮೊದಲ ದಿನದಿಂದಲೇ ಸದಸ್ಯರಾದ ಹಾಗೂ ಅದೇ ರೀತಿ ವರ್ಷದಿಂದ ವರ್ಷಕ್ಕೆ ತಮ್ಮ ಬೆಂಬಲವನ್ನು ಮುಂದುವರೆಸಿದ ಎಲ್ಲಾ ಕನ್ನಡಿಗರಿಗೆ ನಮ್ಮ ಕೃತಜ್ಞತೆಗಳು.
ಕಾರ್ಯಕಾರಿ ಸಮಿತಿ (EC): ನಮ್ಮ ಸುಂದರ ಸುಭದ್ರ ಕನ್ನಡ ಸಮುದಾಯವನ್ನು ನಿರ್ಮಿಸುವಲ್ಲಿ ಪ್ರತಿಯೊಂದು ಕಾರ್ಯಕಾರಿ ಸಮಿತಿಯ ಕೊಡುಗೆ ಅಪಾರ. ಹಿಂದಿನ ಎಲ್ಲ ಕಾರ್ಯಕಾರಿ ಸಮಿತಿಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
ಊಟೋಪಚಾರ ಕೊಡುಗೆ: ಅನೇಕಾನೇಕ ಕಾರ್ಯಕ್ರಮಗಳಲ್ಲಿ ನಮ್ಮೆಲ್ಲರಿಗೂ ಅಚ್ಚುಕಟ್ಟಾಗಿ ಊಟ ಉಪಚಾರವನ್ನು ಒದಗಿಸಿದ, ಬಡಿಸಿದ, ಪ್ರಾಯೋಜಿಸಿದ ಎಲ್ಲಾ ಅನ್ನಪೂರ್ಣೆಯರಿಗೆ ಮತ್ತು ನಳಮಹಾರಾಜರಿಗೆ ಧನ್ಯವಾದಗಳು.
ಸಾಂಸ್ಕೃತಿಕ ಹಾಗೂ ಕಲಾತ್ಮಿಕ ಕೊಡುಗೆ : ನಮ್ಮ ಕರುನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಕೆನಡಾದಲ್ಲಿ ಜೀವಂತಗೊಳಿಸಿ KST ವೇದಿಕೆಯ ಮೇಲೆ ಹೆಜ್ಜೆ ಹಾಕಿದ ಪ್ರತಿ ಹಿರಿಯರಿಂದ ಹಿಡಿದು ಚಿಣ್ಣರವರೆಗೆ ಪ್ರತಿಯೊಬ್ಬ ಕಲಾವಿದರಿಗೂ ಧನ್ಯವಾದಗಳು.
ಸ್ವಯಂಸೇವಕರು:ಸ್ವಯಂಸೇವಕರು ಪ್ರತಿ ಯಶಸ್ವಿ ಸಂಘಟನೆಯ ಬೆನ್ನೆಲುಬು. ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ EC ಯೊಂದಿಗೆ ಭುಜಕ್ಕೆ ಭುಜ ಕೊಟ್ಟು ಸಹಾಯಮಾಡಿದ ಎಲ್ಲ ಸ್ವಯಂಸೇವಕರಿಗೆ ಅನಂತಾನಂತ ಧನ್ಯವಾದಗಳು. ನಮ್ಮ ಸ್ವಯಂ ಸೇವಕರ ಸಮರ್ಪಣಾಭಾವ ಮತ್ತು ಉತ್ಸಾಹವೇ KST ಈ ಮೈಲಿಗಲ್ಲು ವರ್ಷವನ್ನು ತಲುಪಲು ಸಾಧ್ಯವಾದದ್ದು.
ಕನ್ನಡ ಶಾಲೆಗಳು: ನಮ್ಮ ಯುವ ಕನ್ನಡಿಗರಿಗೆ ಅಪಾರವಾದ ಕನ್ನಡ ಭಾಷಾ ಕೌಶಲ್ಯವನ್ನು ನೀಡುತ್ತಿರುವ ನಮ್ಮ ಎಲ್ಲಾ ಸ್ವಯಂಸೇವಕ ಶಿಕ್ಷಕರಿಗೆ ಮತ್ತು ಅವರ ಸಹಾಯಕ ಸಿಬ್ಬಂದಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪದಗಳು ಸಾಕಾಗುವುದಿಲ್ಲ – ಆದರೂ, ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಸ್ವೀಕರಿಸಲು ನಾವು ವಿನಂತಿಸುತ್ತೇವೆ. ಕರ್ನಾಟಕದಿಂದ ದೂರದಲ್ಲಿರುವ ಈ ನಮ್ಮ ಕೆನಡಾದಲ್ಲಿ ಮಾತೃಭಾಷೆಯನ್ನು ಕಲಿಯಲು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವ ಎಲ್ಲಾ ಪೋಷಕರಿಗೆ ಕೂಡ ಧನ್ಯವಾದಗಳು.
ನಮ್ಮ KST ಕನ್ನಡಿಗರು: ಮನೆಯಿಂದ ಬಹು ದೂರ ಬಂದಿರುವ ನಮಗೆ ಕೆಎಸ್ಟಿ ಸಮುದಾಯವೇ ನಮ್ಮ ಕುಟುಂಬ. ಪ್ರತಿ ಕೆಎಸ್ಟಿ ಕಾರ್ಯಕ್ರಮವು ಕುಟುಂಬದ ಪುನರ್ಮಿಲನದಂತೆ.
ಈ ನಿಟ್ಟಿನಲ್ಲಿ, ಕೆಎಸ್ಟಿಯ ಪ್ರತೀ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕಾರಿ ಸಮಿತಿಯವರನ್ನು, ಕಲಾವಿದರನ್ನು, ಸ್ವಯಂಸೇವಕರನ್ನು ಬೆಂಬಲಿಸುವ, ಪ್ರೋತ್ಸಾಹಿಸುವ, ಶ್ಲಾಘಿಸುವ ಮತ್ತು ಹುರಿದುಂಬಿಸುವ, ತನ್ಮೂಲಕ ನಮ್ಮೆಲ್ಲರ ಸಂಭ್ರಮವನ್ನು ಇಮ್ಮಡಿಗೊಳಿಸುವ ಪ್ರತಿಯೊಬ್ಬ ಕೆಎಸ್ಟಿ ಕನ್ನಡಿಗರಿಗೆ ಅನೇಕಾನೇಕ ಧನ್ಯವಾದಗಳು.
ಪ್ರಾಯೋಜಕರು: ನಮ್ಮ KST ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಸೊಗಸಾಗಿ ಹಾಗೂ ಅದ್ಧೂರಿಯಾಗಿ ಮೂಡಿಬರಲು ನಮ್ಮ ಪ್ರಾಯೋಜಕರ ಉದಾರ ಕೊಡುಗೆಗಳು ಪ್ರಮುಖ ಕಾರಣ. ನಮ್ಮ ಎಲ್ಲಾ ಪ್ರಾಯೋಜಕರಿಗೆ ಹೃದಯ ಪೂರ್ವಕ ಧನ್ಯವಾದಗಳು.
ಹಿತೈಷಿಗಳು ಮತ್ತು ಸರ್ಕಾರಿ ಸಂಸ್ಥೆಗಳು: KST ಯ ಅಭಿವೃದ್ಧಿಗೆ ಕಾರಣರಾದ ಕನ್ನಡ ಮತ್ತು ಕನ್ನಡೇತರ ಮಿತ್ರರು ಹಾಗೂ ಕೆನಡಾ ಮತ್ತು ಕರ್ನಾಟಕದ ಸರ್ಕಾರಿ ಸಂಸ್ಥೆಗಳಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.
49ನೇ ಕಾರ್ಯಕಾರಿ ಸಮಿತಿ: 49ನೇ KST ವರ್ಷದ ಕಾರ್ಯಕ್ರಮಗಳನ್ನು ಬಹಳ ಯಶಸ್ವಿಯಾಗಿ ನಿರ್ವಹಿಸಿದ ಶ್ರೀ ಶ್ರೀನಿವಾಸ್ ಭಟ್ ಮತ್ತು ಅವರ ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳು.
ಅಲ್ಲದೇ, 49ನೇ ಕಾರ್ಯಕಾರಿ ಸಮಿತಿಯ ಪ್ರತಿಯೊಬ್ಬ ಸದಸ್ಯರಿಗೂ ನಮ್ಮ ತಂಡಕ್ಕೆ ಹಸ್ತಾಂತರ ಪ್ರಕ್ರಿಯೆಗಳಿಗೆ ಸಹಾಯ ಮಾಡಿದ್ದಕ್ಕಾಗಿ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಇದರಲ್ಲಿ ಅಧ್ಯಕ್ಷ ಶ್ರೀ ಶ್ರೀನಿವಾಸ್ ಭಟ್, ಉಪಾಧ್ಯಕ್ಷ ಶ್ರೀ ಹರಿಪ್ರಸಾದ್ ಉಪಾಧ್ಯಾಯ, ಖಜಾಂಚಿ ಶ್ರೀಮತಿ ಅರುಂಧತಿ ದತ್ತ, ಸುದ್ದಿಪತ್ರ ಸಂಪಾದಕಿ ಶ್ರೀಮತಿ ದೀಪ್ತಿ ಹೆಗ್ಡೆ, ಸಾಂಸ್ಕೃತಿಕ ಸಂಯೋಜಕಿ ಶ್ರೀಮತಿ ಕೃಪಾ ವಿಜಯ್ ಅವರ ಸಮಯ ಮತ್ತು ಸಹಾಯಕ್ಕೆ ವಿಶೇಷ ಧನ್ಯವಾದಗಳು.
ಕಾರ್ಯಸಾಧ್ಯತಾ ವರದಿ ಸಮಿತಿ: KST ತನ್ನ 50 ನೇ ವರ್ಷವನ್ನು ಸಮೀಪಿಸುತ್ತಿರುವಾಗ, ಸುವರ್ಣ ಮಹೋತ್ಸವ ಆಚರಣೆಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಸ್ವಯಂಸೇವಕ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ಸದಸ್ಯರಾದ ಶ್ರೀ ವೆಂಕಟೇಶ್ ಮೈಸೂರು, ಶ್ರೀಮತಿ ಶೋಭಾ ಹೆಗಡೆ, ಶ್ರೀ ಪ್ರಶಾಂತ್ ಸುಬ್ಬಣ್ಣ, ಶ್ರೀ ಪ್ರಸನ್ನ ಕೃಷ್ಣ, ಶ್ರೀ ನಂದ ಸೂರ್ಯ, ಶ್ರೀಮತಿ ಶುಭಾ ಸತೀಶ್ ರಾವ್ ಅವರು ಅದ್ಭುತವಾದ ಕೆಲಸ ಮಾಡಿದ್ದಾರೆ ಮತ್ತು ಅವರು ಮಂಡಿಸಿದ ವರದಿಯು ಯೋಜನೆಗೆ ತುಂಬಾ ಉಪಯುಕ್ತವಾಗಿದೆ. ಈ ವರದಿಯೊಂದಿಗೆ ಕಾರ್ಯಸಾಧ್ಯತಾ ಸಮಿತಿಯು ತಮ್ಮ ಅಧಿಕಾರಾವಧಿಯನ್ನು ಮುಕ್ತಾಯಗೊಳಿಸಿದೆ. ಅವರ ಕೊಡುಗೆಗಳಿಗಾಗಿ ನಾವು ಇಡೀ ಸಮಿತಿಗೆ ತುಂಬಾ ಕೃತಜ್ಞರಾಗಿರುತ್ತೇವೆ.
ಕೊನೆಯದಾಗಿ, ಅಂದರೂ ಮೂಲಭೂತವಾಗಿ, ನಮ್ಮ ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡುವಲ್ಲಿ ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲಕ್ಕಾಗಿ ನಾವು ಸಂಪೂರ್ಣ KST ಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಮ್ಮ ಕನ್ನಡ ಸಮುದಾಯದ ಪರವಾಗಿ ಈ ಸುವರ್ಣ ಮಹೋತ್ಸವ ವರ್ಷದಲ್ಲಿ ಕೆಎಸ್ಟಿ ಕಾರ್ಯಕ್ರಮಗಳ ಕಾರ್ಯನಿರ್ವಹಣೆಯನ್ನು ನಡೆಸುವುದು ನಮಗೆ ಅಪಾರ ಗೌರವ ಮತ್ತು ಸೌಭಾಗ್ಯದ ವಿಷಯವಾಗಿದೆ.
ಮತ್ತೊಮ್ಮೆ ಎಲ್ಲರಿಗೂ ಸುವರ್ಣ ವರ್ಷದ ಅಭಿನಂದನೆಗಳು.
ಬನ್ನಿ, ಎಲ್ಲರೂ ಒಟ್ಟಾಗಿ ಸಡಗರ ಸಂಭ್ರಮದಿಂದ ನಮ್ಮ KST ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳೋಣ.
ಕಾರ್ಯಕಾರಿ ಸಮಿತಿಯ ಪರವಾಗಿ
ಬೃಂದಾ ಮುರಳೀಧರ್ – ಅಧ್ಯಕ್ಷರು
ಈ -ಅಂಚೆ: kst.president@gmail.com